ನಾಗರಿಕರಿಂದ ಬಂದ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿ : ಡಾ. ರಾಜೇಂದ್ರ ಕೆ.ವಿ.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರಿಂದ ಬಂದ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಸಂಜೆ 5.00ರಿಂದ 6.00 ಗಂಟೆಯವರೆಗೆ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗೆ ನೇರವಾಗಿ ಮಾತನಾಡಿದ ಅವರು, ಅವರ ಸಮಸ್ಯೆಗಳನ್ನು ಖುದ್ದು ಆಲಿಸಿದರು. ಅಲ್ಪಾವಧಿ ದೂರುಗಳನ್ನು ಕೂಡಲೆ ಇತ್ಯರ್ಥಪಡಿಸಿ: ನಾಗರಿಕರಿಂದ ಫೋನ್-ಇನ್ ಮೂಲಕ ಬಂದ ದೂರುಗಳನ್ನು ವಿಭಾಗವಾರು ಪಟ್ಟಿ ಮಾಡಿಕೊಂಡು, ಅಲ್ಪಾವಧಿಯಲ್ಲಿ ಇತ್ಯರ್ಥಪಡಿಸಬಹುದಾದ ದೂರುಗಳನ್ನು ತಕ್ಷಣವೇ ಬಗೆಹರಿಸಬೇಕು. ದೀರ್ಘಾವಧಿ ದೂರುಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ, ಅವುಗಳಿಗೆ ಸೂಕ್ತ ಪರಿಹಾರ ಹುಡುಕಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪಾರ್ಕ್ ಜವಾಬ್ದಾರಿ ಒಬ್ಬ ಅಧಿಕಾರಿಗೆ: ಯಾವುದೇ ಪಾರ್ಕ್‌ನಲ್ಲಾಗಲಿ — ವಾಯು ವಿಹಾರ ಮಾರ್ಗ, ಆಸನ, ದೀಪ, ಜಿಮ್ ಉಪಕರಣಗಳು, ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ರೆಂಬೆ-ಕೊಂಬೆ ತೆರವು ಇತ್ಯಾದಿ ಸಮಸ್ಯೆಗಳು ಇದ್ದಲ್ಲಿ, ಅವುಗಳನ್ನು ಒಬ್ಬ ಅಧಿಕಾರಿಯೇ ಮೇಲ್ವಿಚಾರಣೆ ಮಾಡಿ ಬಗೆಹರಿಸಬೇಕು ಎಂದು ಸೂಚಿಸಿದರು. 42 ದೂರುಗಳ ಸ್ವೀಕಾರ: ಇಂದು ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ 42 ದೂರುಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಸಹಾಯ 2.0 ತಂತ್ರಾಂಶದಲ್ಲಿ ದಾಖಲಿಸಬೇಕು. ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು. ಇಲಾಖೆಗಳಿಗೆ ದೂರು ರವಾನಿಸಿ: ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದ ನಾಗರಿಕರ ದೂರುಗಳನ್ನು, ಆಯಾ ಇಲಾಖೆಗೆ ಪತ್ರದೊಂದಿಗೆ ಕಳುಹಿಸಿ ಅವುಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಾಗರಿಕರಿಂದ ಬಂದ ಪ್ರಮುಖ ದೂರುಗಳು: * ರಸ್ತೆ ಬದಿ ಕಸ ಹಾಕುವ ಸಮಸ್ಯೆ ನಿವಾರಿಸಿ * ಅಪಾಯ ಸ್ಥಿತಿಯಲ್ಲಿರುವ ಮರ, ರೆಂಬೆ-ಕೊಂಬೆಗಳ ತೆರವುಗೊಳಿಸಿ * ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ * ವಿದ್ಯುತ್ ಕಂಬ ಅಳವಡಿಸಿ * ಸರ್ಕಾರಿ ಜಾಗದ ಅಕ್ರಮ ಒತ್ತುವರಿ ತೆರವುಗೊಳಿಸಿ * ಸಾರ್ವಜನಿಕ ಶೌಚಾಲಯಗಳ ಸರಿಯಾದ ನಿರ್ವಹಣೆ ಮಾಡಿ * ಪಾದಚಾರಿ ಮಾರ್ಗಗಳಲ್ಲಿನ ಅಕ್ರಮ ಪಾರ್ಕಿಂಗ್ ಮತ್ತು ಒತ್ತುವರಿ ನಿಯಂತ್ರಿಸಿ * ಇ-ಖಾತಾ ಪ್ರಕ್ರಿಯೆಯ ತೊಂದರೆ ನಿವಾರಿಸಿ * ಅಂಜನಾ ನಗರದ ಗಣೇಶ್ ಫಾರ್ಮ್ ಪಾರ್ಕ್ ಅಭಿವೃದ್ಧಿಪಡಿಸಿ * ಎಂ.ಎ.ಇ. ಕಾಲೋನಿಯ ಬೃಹತ್ ನೀರುಗಾಲುವೆ ಪೈಪ್ ದುರಸ್ತಿಗೊಳಿಸಿ * ಅನಧಿಕೃತ ಕಟ್ಟಡಗಳ ತೆರವುಗೊಳಿಸಿ ಪ್ರತಿ ಗುರುವಾರ ಫೋನ್-ಇನ್: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಗುರುವಾರ ಸಂಜೆ 5.00 ರಿಂದ 6.00 ಗಂಟೆಯವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಯಲಿದ್ದು, ನಿಯಂತ್ರಣ ಕೊಠಡಿ ಸಂಖ್ಯೆಗಳಾದ 080-23365469 ಮತ್ತು 080-23563029 ಗೆ ನಾಗರಿಕರು ಕರೆ ಮಾಡಿ ಆಯುಕ್ತರೊಂದಿಗೆ ನೇರವಾಗಿ ಮಾತನಾಡಿ ತಮ್ಮ ಸಮಸ್ಯೆಗಳು ಮತ್ತು ಅಹವಾಲುಗಳನ್ನು ತಿಳಿಸಬಹುದಾಗಿದೆ. ಈ ವೇಳೆ ಅಪರ ಆಯುಕ್ತರು (ಅಭಿವೃದ್ಧಿ) ದಿಗ್ವಿಜಯ್ ಬೋಡ್ಕೆ, ಅಪರ ಆಯುಕ್ತರು (ಕಂದಾಯ) ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರು ಸಂಗಪ್ಪ ಮತ್ತು ಆರತಿ ಆನಂದ್, ಮುಖ್ಯ ಅಭಿಯಂತರ ರಾಜೇಶ್, ಸ್ವಯಂಪ್ರಭ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು
